ನೌಖಾಲೀ
	ಬಾಂಗ್ಲಾದೇಶದ ಚಟಗಾಂವ್ (ಚಿತ್ತಗಾಂಗ್) ವಿಭಾಗದ ಒಂದು ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರ. ಇದನ್ನು ನೋವಾಖಾಲೀ ಎಂದೂ ಕರೆಯಲಾಗುತ್ತದೆ. ಈ ಜಿಲ್ಲೆಗೆ ವೈಜದೀ ಎಂಬ ಹೆಸರೂ ಬಳಕೆಯಲ್ಲಿದೆ. ಜಿಲ್ಲೆಯ ಬಹುಭಾಗ ಮೇಘನಾ ನದಿ ಹರಿಯುವ ಪ್ರದೇಶ. ವಾರ್ಷಿಕ ಸರಾಸರಿ ಮಳೆ 2,920 ಮಿಮೀ. ಬತ್ತ ನಾರು ಮೆಣಸಿನ ಕಾಯಿ, ಈರುಳ್ಳೀ, ಎಣ್ಣೆ ಕಾಳುಗಳೇ ಇಲ್ಲಿಯ ಪ್ರಧಾನ ಬೆಳೆಗಳು. ತೆಂಗು, ಬೇಳೆ, ಕಬ್ಬು ಇತರ ಮುಖ್ಯ ಬೇಳೆಗಳು. ಹಿತ್ತಾಳೆ, ಪಾತ್ರೆಗಳ ತಯಾರಿಕೆ, ಬಟ್ಟೆ ನೇಯ್ಗೆ ಇಲ್ಲಿಯ ಕಸಬುಗಳು.

	ಜಿಲ್ಲೆಯ ಆಡಳಿತ ಕೇಂದ್ರ ನೌಖಾಲೀ ನಗರ. ಸುಧಾರಾಮ ಎನ್ನುವುದು ಇದರ ಹಳೆಯ ಹೆಸರು. ಇದು ಢಾಕಾದಿಂದ ಆಗ್ನೇಯಕ್ಕೆ 120 ಕಿ.ಮೀ. ದೂರದಲ್ಲಿದೆ. ಆಹಾರ ಧಾನ್ಯ, ನಾರು ಎಣ್ಣೆ, ಹಿತ್ತಾಳೆ ಪಾತ್ರೆ ಇವುಗಳ ವ್ಯಾಪಾರ ಇಲ್ಲಿ ಹೆಚ್ಚಾಗಿ ಆಗುತ್ತದೆ.

	1946ರ ಅಕ್ಟೋಬರ್‍ನಲ್ಲಿ ಇಲ್ಲಿ ತೀವ್ರವಾದ ಹಿಂದು-ಮುಸ್ಲಿಮ್ ಗಲಭೆಗಳಾದವು. ಆಗ ಮಹಾತ್ಮ ಗಾಂಧಿಯವರು ಇಲ್ಲಿಗೆ ಬಂದು ಪಾದಾಚಾರಿಗಳಾಗಿ ಸಂಚರಿಸಿ ಶಾಂತಿ ಸ್ಥಾಪನೆಗೆ ನೆರವಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ